ಜೈನ್ ಮಿಲನ್‌ನ
ನೂತನ ಅಂತಾರಾಷ್ಟ್ರೀಯ ಪ್ರಥಮ ಶಾಖೆಯನ್ನು ಯುನೈಟೆಡ್ ಆರಬ್ ಎಮಿರೇಟ್ಸಿನ ವಾಣಿಜ್ಯ ನಗರಿ ದುಬಾಯ್‌ನಲ್ಲಿ
ಮೂಡುಬಿದಿರೆ ಶ್ರೀ ಜೈನಮಠದ ಪೀಠಾಧೀಶರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ
ಮಹಾಸ್ವಾಮಿಗಳವರು ಇಂಡಿಯಾ ಕ್ಲಬ್ ಆಡಿಟೋರಿಯಂನಲ್ಲಿ ಜನವರಿ ೩೧ ಶುಕ್ರವಾರದಂದು ಮಧ್ಯಾಹ್ನ ೧೨. ೧೫ಕ್ಕೆ
ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಪ. ಪೂ. ಶ್ರೀಶ್ರೀಗಳವರು ಅಹಿಂಸೆ, ಅಪರಿಗ್ರಹ,
ಅನೇಕಾಂತ ಎಂಬ ಅಕಾರತ್ರಯಗಳ ಮಹಾನ್ ಸಂದೇಶವನ್ನು ಜಗತ್ತಿಗೆ ನೀಡಿದ ಭಗವಾನ್ ಮಹಾವೀರರ ಆದರ್ಶಸಂದೇಶವನ್ನು
ತಮ್ಮ ಜೀವನದಲ್ಲಿ ಅಳವಡಿಸಿ ಸರ್ವರಿಗೂ ಮಾದರಿಯಾಗುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದರು.
ಭಾರತೀಯ ಪ್ರಾಚೀನ
ಪರಂಪರೆಗಳಲ್ಲಿ ಒಂದಾದ ಜೈನಧರ್ಮ ವಿಶ್ವಭ್ರಾತೃತ್ವ, ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದ ಸಂದೇಶಗಳ
ಮೂಲಕ ಜಾಗತಿಕ ನೆಲೆಯಲ್ಲಿ ತಕ್ಷಶಿಲಾ, ಅಯೋಧ್ಯೆ, ಗಾಂಧಾರ, ಕೈಲಾಸ ಪರ್ವತ, ಮೊದಲಾದೆಡೆ ಜೈನವಿದ್ಯಾಲಯಗಳನ್ನು
ಹೊಂದಿದ ಸಿಂಧುದೇಶ, ನೇಪಾಳ ಮುಂತಾದ ದೇಶಗಳಲ್ಲದೆ ಅಖಂಡ ಭಾರತದಲ್ಲಿ ಹಾಗೂ ಭಾರತದ ಹೊರಗೆ ಇರಾನಿನ
ಆರ್ದಕ್, ದಾರಾ ಶಾಹ, ಸಿಂಧುದೇಶದ ಉದಯನ್ ಎನ್ನುವ ರಾಜನ ಕಾಲದಲ್ಲಿ ಕ್ರಿ. ಪೂ. ಮೂರನೇ ಶತಮಾನಕ್ಕೆ
ಮೊದಲೇ ಅಹಿಂಸೆಯ ಸಂದೇಶದ ಮೂಲಕ ಜಾಗತಿಕ ಮನ್ನಣೆ ಪಡೆದ ವಿಶ್ವಧರ್ಮವಾಗಿದೆ ಎಂದು ಮೂಡುಬಿದಿರೆ ಶ್ರೀಶ್ರೀಗಳವರು
ನುಡಿದರು.
ಜೈನ್ ಮಿಲನ್
ನೂತನ ಅಂತಾರಾಷ್ಟ್ರೀಯ ಶಾಖೆಯ ಮೂಲಕ ಉತ್ತಮ ಧಾರ್ಮಿಕ, ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆಗಳನ್ನು
ಸಂಘಟಿಸುವುದರ ಮೂಲಕ ಆದರ್ಶ ಸಂಸ್ಥೆಯಾಗಿ ಬೆಳೆದು ಗಲ್ಫ್ ಸುತ್ತಮುತ್ತ ಧರ್ಮಸಾಮರಸ್ಯ ವಿಶ್ವಶಾಂತಿಯ
ಸಂದೇಶ ಬೀರಲಿ ಎಂದು ಪ್ರಥಮ ಅಂತಾರಾಷ್ಟ್ರೀಯ ಜೈನ್ ಮಿಲನ್ ಸ್ವತಂತ್ರ ಶಾಖೆಯನ್ನು ಉದ್ಘಾಟನೆಯ ಅಧ್ಯಕ್ಷತೆಯನ್ನು
ವಹಿಸಿದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಡಿ. ಸುರೇಂದ್ರ ಕುಮಾರ್, ಶುಭ ಹಾರೈಸಿದರು. ಇದೇ ಸಂದರ್ಭ ನೂತನ
ಮಿಲನ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ನೆರವೇರಿತು.
ದಿನವಿಡೀ ನಡೆದ
ಕಾರ್ಯಕ್ರಮದ ಆರಂಭದಲ್ಲಿ ಪೂಜ್ಯ ಶ್ರೀಶ್ರೀಗಳವರಿಗೆ ಅತಿಥಿ ಅಭ್ಯಾಗತರಿಗೆ ಪೂರ್ಣಕುಂಭ ಸ್ವಾಗತ ಸಾಪ್ರದಾಯಿಕ
ಕರಾವಳಿ ಜೈನ ಬಾಂಧವರ ಉಡುಗೆ ತೊಡುಗಯನ್ನು ತೊಟ್ಟು ಸಾಂಪ್ರದಾಯಿಕ ಸ್ವಾಗತ ನೀಡಿದರು. ಪೂರ್ಣಕುಂಭ ಸಹಿತ ಕಲಶ ಹಿಡಿದ ಮುತ್ತೈದೆಯರು ಜೈನಮಂತ್ರ
ಘೋಷ, ಜಯಕಾರಗಳೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ಬರಮಾಡಿಕೊಂಡರು. ತದನಂತರ ಪ. ಪೂ. ಮೂಡುಬಿದಿರೆ ಶ್ರೀಶ್ರೀಗಳವರ
ದಿವ್ಯ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಭಗವಾನ್ ಆದಿನಾಥ ಸ್ವಾಮಿ ನೂತನ ಬಿಂಬದ ಪಂಚಾಮೃತ ಅಭಿಷೇಕ,
ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ನೆರವೇರಿತು. ಜೈನ ಮಿಲನ್ ವಲಯ ೦೮ರ ಅಧ್ಯಕ್ಷ ಎಸ್. ಮೃತ್ಯುಂಜಯ,
ಮಿಲನ್ ಸಂಘಾಟಕ ಪುಷ್ಪರಾಜ್ ಜೈನ್, ಮಂಗಳೂರು, ಜಿನಗೊಂಡ ಪಾಟೀಲ್, ಪ್ರಸನ್ನ ಕುಮಾರ್, ಭಾರತೀಯ ವಿವಿಧ
ಸಮಾಜ ಸಂಘಟನೆಗಳ ಪ್ರಮುಖರನ್ನು ಶ್ರೀಶ್ರೀಗಳವರು ಹರಸಿ ಆಶೀರ್ವದಿಸಿದರು. ಬಳಿಕ ದುಬೈ ಜೈನ್ ಮಿಲನ್‌ನವರ
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.
ರಾಜವರ್ಮ ಬಲ್ಲಾಳ್,
ಶೋಭಕರ ಬಲ್ಲಾಳ್, ಅನಿತಾ ಸುರೇಂದ್ರ ಕುಮಾರ್, ಉಷಾ ದೇವಕುಮಾರ್ ಕಾಂಬ್ಲಿ, ದುಬಾಯ್‌ನ ಉದ್ಯಮಿ ಫ್ರಾಂಕ್ಲಿನ್ ತೋನ್ಸೆ, ಜಿತೇಶ್ ಕೋಡಿಪಾಡಿ, ಸಂದೇಶ್ ಅಂಗಡಿಬೆಟ್ಟು, ಅನಂತವೀರ,
ಅರವಿಂದ್ ಜೈನ್, ಭರತ್ ಕುಮಾರ್, ರತ್ನಾಕರ ಜೈನ್ ದುಬೈ, ಶ್ರೇಯಸ್ ಕುಮಾರ್, ನೂತನ ಪದಾಧಿಕಾರಿಗಳಾಗಿ
ಆಯ್ಕೆಯಾದರು. ಶ್ರೀ ದೇವ್‌ಕುಮಾರ್ ಕಾಂಬ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘಟನೆಯನ್ನು
ಸಬಲಗೊಳಿಸಿ ಸಮಾಜದ ಪ್ರತಿಭಾನ್ವಿತರನ್ನು ಗುರುತಿಸುವ ಕೆಲಸ ಜೈನ್ ಮಿಲನ್‌ನಿಂದ ಆಗಬೇಕಾಗಿದೆ ಎಂದು
ಸರ್ವರ ಸಹಕಾರ ಕೋರಿದರು. ಇದೇ ಸಂದರ್ಭ ಆಶುಕವಿ ಕಲ್ಲಮುಂಡ್ಕೂರಿನ ತುಳು ಚಿತ್ರನಟ ಸುಭಾಸ್ ಚಂದ್ರ
ಪಡಿವಾಳ್, ಜೈನ್ ಮಿಲನ್‌ಗೆ ಶುಭ ಹಾರೈಸಿ ಆಶುಕವನವನ್ನು ವಾಚಿಸಿದರು. ದುಬೈ, ಶಾರ್ಜಾ, ಅಬುದಾಬಿ ಸೇರಿದಂತೆ
ಸುತ್ತಮುತ್ತಲಿನ ಕೊಲ್ಲಿ ರಾಷ್ಟ್ರದ ಜೈನರು ಸಾಕಷ್ಟು ಪ್ರಮಾಣದಲ್ಲಿ ಸೇರಿದ್ದರು. ಅರವಿಂದ್ ಜೈನ್
ಸ್ವಾಗತಿಸಿದರು. ಸಂದೇಶ್ ಅಂಗಡಿಬೆಟ್ಟು ವಂದನಾರ್ಪಣೆಗೈದರು. ಸಂಜೆ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಂಡಿತು.
No comments:
Post a Comment